ಕ್ರೈಯೊಲೈಟ್

	ಅಲ್ಯೂಮಿನಿಯಂ ಮತ್ತು ಸೋಡಿಯಂ ಲವಣಗಳ ಫ್ಲೂರೈಡ್. ಇದರ ರಾಸಾಯನಿಕ ಸೂತ್ರ ಓಚಿ3ಂಟಈ6. ಇದು ಹರಳುಗಳಾಗಿ ಮತ್ತು ದಟ್ಟವಾದ ಉಂಡೆಗಳಾಗಿ ನಿಸರ್ಗದಲ್ಲಿ ದೊರೆಯುತ್ತದೆ. ಇದೊಂದು ಸಚ್ಛಿದ್ರ ಖನಿಜಕಣ. ಗಾಜಿನ ಅಥವಾ ಗೋಂದಿನ ಹೊಳಪಿನಿಂದ ಕೂಡಿರುತ್ತದೆ. ಹರಳಿನ ಪದರಗಳ ಅಂಚುಗಳಿಗೆ ಮುತ್ತಿನ ಹೊಳಪಿದೆ. ಹರಳಿನ ಬಣ್ಣ ಸಾಮಾನ್ಯವಾಗಿ ವರ್ಣರಹಿತವಾದ ಅಥವಾ ಹಿಮಸದೃಶವಾದ ಬಿಳಿ. ಕೆಲವೊಮ್ಮೆ ಕೆಂಪು, ಬೂದಿಗೆಂಪು, ಇಟ್ಟಿಗೆ-ಕೆಂಪು, ಕಪ್ಪು ಬಣ್ಣದಲ್ಲಿ ಸಹ ಕಾಣಿಸಿಕೊಳ್ಳುತ್ತದೆ. ಇದರ ರಿಫ್ರೇಕ್ಷಣಾಂಕ 1.388. ಅಂದರೆ ಹೆಚ್ಚುಕಡಿಮೆ ನೀರಿನ ರಿಫ್ರೇಕ್ಷಣಾಂಕದಷ್ಟಾಯಿತು. ಆದ ಕಾರಣ ಹರಳುಗಳನ್ನು ನೀರಿನಲ್ಲಿ ಮುಳುಗಿಸಿದರೆ ಇದನ್ನು ನೀರಿನಿಂದ ಬೇರೆಯಾಗಿ ಗುರುತಿಸುವುದು ಕಷ್ಟಸಾಧ್ಯ. ಮೋಹ್ಸ್‍ಮಾನಕದಲ್ಲಿ ಇದರ ಕಾಠಿಣ್ಯ 2.5. ಸಾಪೇಕ್ಷ ಸಾಂದ್ರತೆ 2.95. ಸೈಡರೈಟ್, ಗ್ಯಾಲಿನ ಮತ್ತು ಚಾಲ್ಕೊಪೈರೇಟುಗಳೊಡನೆ ಕ್ರೈಯೊಲೈಟಿನ ಸಂಪರ್ಕ ಇರುವುದನ್ನು ಗ್ರೀನ್‍ಲೆಂಡಿನ ಈವಿಗ್‍ಟೂಟ್ ಎಂಬಲ್ಲಿ ಪರಿಶೋಧಿಸಲಾಯಿತು (1794).

	ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಅದುರನ್ನು ಜಾಗ್ರತೆ ಕರಗಿಸುವುದಕ್ಕಾಗಿ ಮತ್ತು ಸೋಡಿಯಂ ಲವಣಗಳು ಮತ್ತು ಕೆಲವು ಬಗೆಯ ಗಾಜುಗಳ ಮತ್ತು ಪಿಂಗಾಣಿ ಸಾಮಾನುಗಳ ತಯಾರಿಕೆಯಲ್ಲಿ ಕ್ರೈಯೊಲೈಟಿನ ಉಪಯೋಗವಿದೆ. ಅಲ್ಯೂಮಿನಿಯಂ ಲೋಹದ ಉತ್ಪಾದನೆಯಲ್ಲಿ ನೈಸರ್ಗಿಕ ಕ್ರೈಯೊಲೈಟ್ ಒಂದು ಅಗತ್ಯ ವಸ್ತು. ಕ್ರೈಯೊಲೈಟ್ ಬಹಳ ವಿರಳ ವಸ್ತು. ಪ್ರಪಂಚದಲ್ಲಿ ಗ್ರೀನ್‍ಲೆಂಡ್ ಮತ್ತು ರಷ್ಯಗಳಲ್ಲಿ ಮಾತ್ರ ಕ್ರೆಯೊಲೈಟಿನ ಗಣಿಗಳಿವೆ. ಕೃತಕ ಕ್ರೈಯೊಲೈಟಿನ ತಯಾರಿಕೆಯೂ ಆಗುತ್ತಿದೆ. ಭಾರತದಲ್ಲಿ ಕ್ರೈಯೊಲೈಟಿನ ಪೂರೈಕೆ ಗಣಿಗಳಿಂದಲ್ಲ, ಬದಲು ಅದರ ಆಮದಿನಿಂದ ಆಗುತ್ತಿದೆ. 				(ಎಸ್.ಆರ್.ಎನ್.; ಎಂ.ಆರ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ